ಬೆಳಗಾವಿ : ರಾಜ್ಯದಲ್ಲಿ ಯಾವುದೇ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ ಬದಲಿಗೆ ಎಪಿಎಲ್ ಕಾರ್ಡ್ ಗೆ ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವ ಕೆ.ಎಚ್. ಮುನಿಯಪ್ಪ ವಿಧಾನಪರಿಷತ್ ನಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕೆ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಲಕ್ಷದ 20 ಸಾವಿರಕ್ಕಿಂತ ಅಧಿಕ ಆದಾಯ, ತೆರಿಗೆ ಪಾವತಿಸುತ್ತಿರುವವರ ಬಿಪಿಎಲ್ ಕಾರ್ಡ್ ಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆಹಾರ ಭದ್ರತಾ ಕಾಯ್ದೆಯನ್ವಯ ಅಂತ್ಯೋದಯ ಪಡಿತರ ಚೀಟಿಗೆ ತಲಾ 35 ಕೆಜಿ ಅಕ್ಕಿ ಮತ್ತು ಆದ್ಯತಾ ಪಡಿತರ ಚೀಟಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದರು.
2022ರ ಡಿಸೆಂಬರ್ ಮಾಹೆಯಲ್ಲಿ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿ ಕೊಡಲಾಗುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 1 ಕೋಟಿ 2 ಲಕ್ಷ ಕುಟುಂಬಗಳಿಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ಹೇಳಿದರು.