ಚಿತ್ರದುರ್ಗ: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಸುರಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಒಟ್ಟು 158 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದರಲ್ಲಿ ಹಿರಿಯೂರು ತಾಲೂಕು ಅತಿ ಹೆಚ್ಚು ಹಾನಿಯನ್ನು ಸಂಭವಿಸಿದ್ದು 102.25 ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿವೆ. ಚಳ್ಳಕೆರೆ ತಾಲೂಕಿನಲ್ಲಿ 44.80 ಹೆಕ್ಟೇರ್ , ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ಒಟ್ಟಾಗಿ 11.00 ಹೆಕ್ಟೇರ್, ಮೊಳಕಾಲ್ಮೂರು ತಾಲೂಕಿನಲ್ಲಿ 0.80 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಕಂಡುಬಂದಿದೆ.
ಹಾನಿಗೊಳಗಾದ ತೋಟಗಾರಿಕೆ ಬೆಳೆಗಳ ಪೈಕಿ ದಾಳಿಂಬೆ 77 ಹೆಕ್ಟೇರ್, ಬಾಳೆ 22 ಹೆಕ್ಟೇರ್, ಪಪ್ಪಾಯಿ 16 ಹೆಕ್ಟೇರ್, ಮಾವು 13 ಹೆಕ್ಟೇರ್ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು ಅಂದಾಜು 32,58,150 ರೂ. ಗಳ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪರಿಹಾರದ ಹಣವು ಸರ್ಕಾರದ ಪರಿಹಾರ ತಂತ್ರಾಂಶದ ಮೂಲಕ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಯಾವುದೇ ಸಮೀಕ್ಷೆಗಳು ಬಾಕಿ ಇರುವುದಿಲ್ಲ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬಿಸಿಲಾಘಾತದ ಕುರಿತು ಚರ್ಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ತಹಶೀಲ್ದಾರರು, ತಾ.ಪಂ.ಇಓಗಳು, ವಿವಿಧ ನಗರಸಭೆಗಳ ಪೌರಾಯುಕ್ತು ಉಪಸ್ಥಿತರಿದ್ದರು.

































