ದಾವಣಗೆರೆ : ಕೇವಲ 5 ರೂ. ಕುರ್ ಕುರೆ ವಿಚಾರಕ್ಕಾಗಿ ಮಾರಾಮಾರಿ ನಡೆದು 10ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ಘಟನೆ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ನಡೆದಿದೆ.
ಕುರ್ ಕುರೆ ಪ್ಯಾಕೇಟ್ ವಿಚಾರಕ್ಕೆ ಹೊನ್ನೇಬಾಗಿಯ ಅತೀಫ್ ಉಲ್ಲಾ ಹಾಗೂ ಸದ್ದಾಂ ಕುಟುಂಬದ ನಡುವೆ ಗಲಾಟೆ ನಡೆದಿದೆ. ಅತೀಫ್ ಉಲ್ಲಾ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದು, ಅದೇ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್ ಕುರೆ ಖರೀದಿ ಮಾಡಿದ್ದರು. ಆದರೆ ಅವಧಿ ಮುಗಿದ ಕುರ್ ಕುರೇ ಮಾರಾಟ ಮಾಡಿದ್ದೀಯಾ, ಬೇರೆಯದನ್ನು ಕೊಡು ಎಂದು ಕೇಳಿದ್ದಕ್ಕೆ ಮಾರಾಮಾರಿ ನಡೆದಿದೆ. ಈ ಸಂಬಂಧ ಸದ್ದಾಂ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೇ ವಿಚಾರಕ್ಕೆ ದ್ವೇಷ ಸಾಧಿಸಿದ ಅತೀಫ್ ಕುಟುಂಬಸ್ಥರು, ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸದ್ದಾಂ ಕುಟುಂಬದ ಮೇಲೆ ಏಕಾಏಕಿ ಕಾರಿನಲ್ಲಿ ಬಂದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ದೊಣ್ಣೆ ಹಿಡಿದು 20ಕ್ಕೂ ಹೆಚ್ವು ಜನರು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಹಲ್ಲೆ ಮಾಡುವ ಸಂದರ್ಭದಲ್ಲಿ ಬಿಡಿಸಲು ಬಂದವರ ಮೇಲೆಯೂ ಹಲ್ಲೆ ನಡೆಸಿದ್ದು, ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಎರಡು ಕುಟುಂಬದಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 20 ಕ್ಕೂ ಹೆಚ್ಚು ಜನರು ಬಂಧನ ಭೀತಿಯಿಂದ ಗ್ರಾಮ ತೊರದು ಪರಾರಿಯಾಗಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.