ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯಲು ಈಗ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಮರಣ ಹೊಂದಿರುವ ಫಲಾನುಭವಿಗಳ ಖಾತೆಗೂ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್ಸಿ ಆಗಿರುವ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು.
ದಿನೇಶ್ ಗೂಳಿಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್ಗಳಿಗೆ ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದು ಹೇಗೆ ಕಡ್ಡಾಯವೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ತರಲು ಉದ್ದೇಶಿಸಲಾಗಿದೆ.
ಯೋಜನೆಯಡಿ ಸುಮಾರು 1.24 ಕೋಟಿ ಫಲಾನುಭವಿಗಳಿದ್ದು, ಇದಕ್ಕಾಗಿ ಸರ್ಕಾರ 57,300 ಕೋಟಿಗೂ ಅಧಿಕ ಹಣ ವ್ಯಯಿಸಿದೆ. ಮರಣ ಹೊಂದಿದವರ ಹೆಸರಿನಲ್ಲಿ ಹಣ ಪಾವತಿಯಾಗುತ್ತಿರುವುದನ್ನು ತಡೆದು, ಸರ್ಕಾರದ ಹಣ ಸೋರಿಕೆಯನ್ನು ನಿಲ್ಲಿಸುವುದು ಉದ್ದೇಶವಾಗಿದೆ.

































