ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿ, ಆಕೆಗೆ ಹಿಂಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಅಲ್ಲದೇ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ಕೂಡ ದಾಖಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಅಲ್ಲದೇ ಮಕ್ಕಳ ಹಕ್ಕುಗಳ ಆಯೋಗ ಹಾಗೂ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ, ಪ್ರಕರಣ ದಾಖಲಗುತ್ತಿದ್ದಂತೆ ಮಲ್ಲಿಕಾರ್ಜುನ ಮುತ್ಯಾ ನಾಪತ್ತೆಯಾಗಿದ್ದಾನೆ.
ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಮಹೆಲ್ ಗ್ರಾಮದ 26 ವರ್ಷ ಆಸುಪಾಸಿನ ಮಲ್ಲಿಕಾರ್ಜುನ ಮುತ್ಯಾ, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ಧಿ ಪಡೆದಿದ್ದ. ಉತ್ತರ ಕರ್ನಾಟಕದ ಅನೇಕ ಭಕ್ತರು ಇವರನ್ನು ಅಪ್ಪಾಜಿ ಅಥವಾ ನಡೆದಾಡುವ ದೇವರು ಎಂದು ನಂಬಿ ಗೌರವಿಸುತ್ತಾರೆ.
ಮುತ್ಯಾ, ಅಪ್ರಾಪ್ತ ಬಾಲಕಿಯೋರ್ವಳ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು, ಆಕೆಯ ಕತ್ತು ಹಿಸುಕಿ ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಹಲವು ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿವೆ.






























