ಚಿತ್ರದುರ್ಗ : ಕಳೆದ 24 ರಂದು ರಾಜ್ಯ ವಿಶೇಷ ಸಚಿವ ಸಂಪುಟ ಸಭೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೊಳಿಸಿರುವುದು ಸುಪ್ರೀಂಕೋರ್ಟ್ ತೀರ್ಪು ಹಾಗೂ ನಾಗಮೋಹನ್ದಾಸ್ ಆಯೋಗದ ವರದಿಯ ವಿರುದ್ದವಾಗಿದೆ ಎಂದು ಮಾದಿಗ ನೌಕರರ ಸಾಂಸ್ಕøತಿಕ ಸಂಘದ ರಾಜ್ಯಾಧ್ಯಕ್ಷ ಹಿರೆಹಳ್ಳಿ ಮಲ್ಲಿಕಾರ್ಜುನ್ ಆಪಾದಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 15 ಕ್ಕಿಂತ ಕಮ್ಮಿ ಸಂಖ್ಯೆಯ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದರೆ ಒಳ ಮೀಸಲಾತಿ ಅನ್ವಯಿಸುವುದಿಲ್ಲ. ಯಾರು ಬೇಕಾದರೂ ಸ್ಪರ್ಧಿಸಬಹುದು. ಎ.ಬಿ.ವರ್ಗದ ನೌಕರಿಯಲ್ಲಿ ಒಳ ಮೀಸಲಾತಿಯನ್ನು ತರಬಾರದೆನ್ನುವುದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರ ಉದ್ದೇಶ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳನ್ನು ರಾಜ್ಯ ಸರ್ಕಾರ ಗಾಳಿಗೆ ತೂರಿದೆ. ಪೌರ ಕಾರ್ಮಿಕರು ಡಿ.ಗ್ರೂಪ್ನಲ್ಲಿಯೇ ಇರಬೇಕೆನ್ನುವ ಉದ್ದೇಶವಿಟ್ಟುಕೊಂಡಿರುವ ಇವರಿಗೆ ಮಾದಿಗರನ್ನು ಪ್ರತಿನಿಧಿಸುವ ಅರ್ಹತೆಯಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳ ಮೀಸಲಾತಿ ಗೊಂದಲವನ್ನು ಪರಿಹರಿಸಬೇಕೆಂಬ ಇಚ್ಚೆಯಿಲ್ಲ. ಸುಪ್ರೀಂಕೋರ್ಟ್ ಆದೇಶ ಹೊರಡಿಸಿದಾಗಿನಿಂದಲು ಸರ್ಕಾರ ತೀರ್ಪಿನ ವಿರುದ್ದ ನಡೆದುಕೊಳ್ಳುತ್ತಿದೆ. ಮಾದಿಗ ಜನಾಂಗದ ಕೆಲವು ಮುಖಂಡರುಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಹಾರ ಹಾಕಿ ಸಿಹಿ ತಿನ್ನಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.?
ಜನತಂತ್ರ ಉಳಿಸಿ ಆಂದೋಲನ-ಕರ್ನಾಟಕ ರಾಜ್ಯ ಪ್ರಧಾನ ಸಂಚಾಲಕ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆಯೆ ವಿನಃ ಅದರಲ್ಲಿನ ಗೊಂದಲವನ್ನು ಬಗೆಹರಿಸಿಲ್ಲ. ಮನಸ್ಸಿಲ್ಲ. ನಾಗಮೋಹನ್ದಾಸ್ ಆಯೋಗದ ವರದಿ ವೈಜ್ಞಾನಿಕವಾಗಿದ್ದರೂ ಯಾರದೋ ಮಾತು ಕೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ದತ್ತಾಂಶ ಸಂಗ್ರಹಿಸಿ ಪರಿಶಿಷ್ಟರಲ್ಲಿಯೇ ಕಿತ್ತಾಟವಿಟ್ಟಿದ್ದಾರೆ. ವೈಜ್ಞಾನಿಕ, ವೈಚಾರಿಕ, ಸೈದ್ದಾಂತಿಕವಿಲ್ಲದ ರಾಜ್ಯ ಸರ್ಕಾರದ ಕ್ರಮವನ್ನು ನಾವುಗಳು ಖಂಡಿಸುತ್ತೇವೆ. ಒಳ ಮೀಸಲಾತಿ ಜಾರಿಗೊಳಿಸಿರುವುದು ಸಾಮಾಜಿಕ ನ್ಯಾಯ, ಅಂಬೇಡ್ಕರ್ ಸಿದ್ದಾಂತಗಳಿಗೆ ವಿರುದ್ದವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಸರ್ಕಾರಕ್ಕೆ ಒಳ ಮೀಸಲಾತಿ ಬೇಕಿಲ್ಲವೆನ್ನುವುದನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಮನುಧರ್ಮಶಾಸ್ತ್ರ ಮನಸ್ಸುಳ್ಳವರು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.
ರಾಜ್ಯ ವಿಶೇಷ ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದೆ ತಡ ಮಾಜಿ ಸಚಿವ ಹೆಚ್.ಆಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊಡ್ಡ ಹಾರ ಹಾಕಿ ಸಿಹಿ ತಿನ್ನಿಸಿರುವುದು ಏತಕ್ಕಾಗಿ ಎನ್ನುವುದು ನಮ್ಮನ್ನು ಕಾಡುತ್ತಿದೆ. ಮಾದಿಗರ ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ ಕಾಂಗ್ರೆಸ್ ನಾಯಕರುಗಳನ್ನು ಮೆಚ್ಚಿಸಲು ಈ ರೀತಿ ಆಟವಾಡುತ್ತಿದ್ದಾರೆಂದು ಟೀಕಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಕುಮಾರ್ ಮಾತನಾಡುತ್ತ ರಾಜ್ಯ ಸಚಿವ ಸಂಪುಟ ವಿಶೇಷ ಸಭೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಅನುಷ್ಟಾನಗೊಳಿಸಿರುವುದು ಕಾನೂನು ಬಾಹಿರ. ಅಂಬೇಡ್ಕರ್ ತತ್ವ ಸಿದ್ದಾಂತಕ್ಕೆ ತದ್ವಿರುದ್ದವಾಗಿದೆ. ಒಳ ಮೀಸಲಾತಿಯನ್ನು ಜಾರಿಗೆ ತರುವಾಗ ಆಯಾ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಕಲ್ಪಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಧಿಕ್ಕರಿಸಲಾಗಿದೆ ಎಂದರು.
ಸಿ.ಪಿ.ಸುಧಾಕರ್, ಸಿ.ಎ.ಚಿಕ್ಕಣ್ಣ, ಡಿ.ದುರುಗೇಶ್, ರಾಮು ಗೋಸಾಯಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
































