ಆಂದ್ರಪ್ರದೇಶ : ಮಾಜಿ ಸಿಎಂ ಹಾಗೂ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ ಮೋಹನ್ ರೆಡ್ಡಿ ರೋಡ್ ಶೋ ವೇಳೆ ವ್ಯಕ್ತಿಯೋರ್ವ ಅವರ ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ಪಲ್ನಾಡು ಜಿಲ್ಲೆಗೆ ಭೇಟಿ ನೀಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್ಪುರಂ ಹೆದ್ದಾರಿಯಲ್ಲಿ ವೈಎಸ್ಆರ್ಸಿಪಿ ಆಯೋಜಿಸಿದ್ದ ರ್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೈಎಸ್ಆರ್ಸಿಪಿ ಪಕ್ಷದ ಕಟ್ಟಾ ಬೆಂಬಲಿಗ ಚೀಲಿ ಸಿಂಗಯ್ಯ (54) ಮೃತ ದುರ್ವೈವಿ ಎಂದು ಹೇಳಲಾಗಿದೆ.
ಜಗನ್ ಮೋಹನ್ ರೆಡ್ಡಿ ಅವರನ್ನು ನೋಡಲು ರಸ್ತೆ ಬದಿ ನೂರಾರು ಸಂಖ್ಯೆಯಲ್ಲಿ ವೈಎಸ್ಆರ್ಸಿಪಿ ಕಾರ್ಯಕರ್ತರು ನೆರೆದಿದ್ದರು. ಈ ವೇಳೆ ಜಗನ್ ಕಾರಿನ ಡೋರ್ ತೆಗೆದು ಅಭಿಮಾನಿಗಳತ್ತ ಕೈಬಿಸುತ್ತಿದ್ದರೆ, ಇತ್ತ ಚಾಲಕನ ಕಡೆಗೆ ಅಭಿಮಾನಿ ಸಿಂಗಯ್ಯ ಕಾರು ಮುಂಭಾಗದಲ್ಲಿ ಬಿದ್ದಿದ್ದಾನೆ. ಇದನ್ನು ಗಮನಿಸದ ಚಾಲಕ ಹಾಗೇ ಕಾರು ಚಲಾಯಿಸಿದ್ದು, ಕಾರಿನ ಮುಂದಿನ ಚಕ್ರ ಸಿಂಗಯ್ಯನ ತಲೆ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೂನ್ 18ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ಕೂಡಲೇ ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಕೂಡಲೇ ಸಿಂಗಯ್ಯ ನನ್ನುಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ, ಕಾರು ಚಾಲಕ ರಮಣ ರೆಡ್ಡಿ ಹಾಗೂ ಜಗನ್ ಇದ್ದ ಕಾರು ಮಾಲೀಕ ಕೃಷ್ಣ ಎನ್ನುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಾಲಕ ರಮಣ ರೆಡ್ಡಿಯನ್ನು ಬಂಧಿಸಲಾಗಿದೆ. ಎ2 ಆರೋಪಿಯಾಗಿರುವ ಜಗನ್ ಮೋಹನ್ ರೆಡ್ಡಿ ಸದ್ಯ ಬೆಂಗಳೂರಿನಲ್ಲಿ ಇದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.