ಉತ್ತರ ಪ್ರದೇಶ : ಸಾವಿರದ ಆಸುಪಾಸಿನಲ್ಲಿರುವ ಹುದ್ದೆಗಳಿಗಾಗಿ ಲಕ್ಷಾಂತರ ಜನರು ಕೋಚಿಂಗ್ ಸೇರಿ, ವರ್ಷವಿಡೀ ಅಧ್ಯಯನ ಮಾಡುತ್ತಾರೆ. ಆದರೆ ಕೆಲವರು ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಯಾವುದೇ ಕೋಚಿಂಗ್ ಪಡೆಯದೇ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಅದಿತಿ ವರ್ಷ್ಣಿ ಅವರ ಸ್ಫೂರ್ತಿದಾಯಕ ಕತೆ ಇದು.
ಅದಿತಿ ವರ್ಷ್ಣಿ ಉತ್ತರ ಪ್ರದೇಶದ ಬರೇಲಿ ನಿವಾಸಿ. ಅವರ ಶಾಲಾ ಶಿಕ್ಷಣವನ್ನು ಬರೇಲಿಯ ಬಿಷಪ್ ಕೊನ್ರಾಡ್ ಶಾಲೆಯಲ್ಲಿ ಮಾಡಿದ್ದಾರೆ. ಅವರು ಮೂವರು ಒಡಹುಟ್ಟಿದವರಲ್ಲಿ ಹಿರಿಯಳು. ಅವರ ತಂದೆ ಸ್ಥಳೀಯ ಬಟ್ಟೆ ವ್ಯಾಪಾರಿ ಮತ್ತು ತಾಯಿ ಗೃಹಿಣಿ.
ಅದಿತಿ ದೆಹಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿಯನ್ನು ಪಡೆದಿದ್ದಾರೆ. ಇದಾದ ನಂತರ ಅವರು ಸ್ನಾತಕೋತ್ತರ ಪದವಿಗೆ ದಾಖಲಾದರು. ಆದರೆ ಮಧ್ಯದಲ್ಲೇ ವ್ಯಾಸಂಗ ಬಿಟ್ಟು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಸಮಾಜಶಾಸ್ತ್ರವನ್ನು ಅದಿತಿ ಅವರು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. 2022ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅದಿತಿ ಅವರು ಅಖಿಲ ಭಾರತ 57ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.
































